ತ್ಯಾಗರಾಜ
1767-1848 ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಹುಟ್ಟಿದ್ದು ತಂಜಾವೂರು ಜಿಲ್ಲೆಯ ತಿರುವಾಲೂರಿನಲ್ಲಿ . ಇವರ ಮುತ್ತಾತ ಕಾಕರ್ಲ ಪಂಚನದ ಬ್ರಹ್ಮಂ ಕರ್ನೂಲ್ ಜಿಲ್ಲೆಯ ಕಾಕರ್ಲ ಗ್ರಾಮದಿಂದ ತಿರುವಾಲೂರಿಗೆ ವಲಸೆ ಬಂದಿದ್ದರು. ಅವರ ಮಗ ಗಿರಿರಾಜ ಬ್ರಹ್ಮಂ ತಂಜಾವೂರಿನ ತುಳಜಾಜಿ ಮಹಾರಾಜನ ಆಸ್ಥಾನದಲ್ಲಿ ಪಂಡಿತರಾಗಿದ್ದರು. ಅವರು ಹಲವಾರು ಯಕ್ಷಗಾನಗಳನ್ನು ರಚಿಸಿದ್ದರಂತೆ. ಅವರ ಮಗ ರಾಮ ಬ್ರಹ್ಮಂ ಕೂಡ ಸಂಸ್ಕøತ ವಿದ್ವಾಂಸರು ; ರಾಮಾಯಣ ಪ್ರಸಂಗಗಳನ್ನು ರಾಜಾಸ್ಥಾನದಲ್ಲಿ ನಡೆಸಿ ಸನ್ಮಾನಿತರಾದವರು. ದೊಡ್ಡ ರಾಮಭಕ್ತರು. ಅವರ ಮೂರನೆಯ ಮಗನೇ ರಾಮಬ್ರಹ್ಮಂ. ಮೊದಲ ಇಬ್ಬರು ಮಕ್ಕಳು ಅವಿಧೇಯರಾಗಿದ್ದು ಲಂಪಟರಾಗಿದ್ದ ಕಾರಣ ತಂದೆತಾಯಿಯರು ಈ ಮೂರನೆಯ ಮಗನೊಂದಿಗೆ ತಿರುವಾಲೂರನ್ನು ಬಿಟ್ಟು ಪಂಚನದ ಕ್ಷೇತ್ರವೆನಿಸಿದ ತಿರುವಯ್ಯಾರಿಗೆ ಬಂದು ಸೇರಿಕೊಂಡರು. 

ಇಲ್ಲಿ ತ್ಯಾಗರಾಜರಿಗೆ ಸಂಸ್ಕøತ, ತೆಲಗು ವಿದ್ಯಾಭ್ಯಾಸವಾಯಿತು. ತಂದೆಯಿಂದಲೇ ರಾಮಮಂತ್ರದ ಉಪದೇಶವಾಯಿತು. ರಾಮಕೃಷ್ಣಾನಂದ ಸ್ವಾಮಿಯೆಂಬ ಸನ್ಯಾಂಸಿಯಿಂದ ರಾಮಷಡಾಕ್ಷರೀ ಮಂತ್ರ ಉಪದೇಶವೂ ಆಯಿತು. ತ್ಯಾಗರಾಜರಿಗೆ ಎಳೆತನದಿಂದಲೂ ಭಗವದ್ಭಕ್ತಿ. ತಂದೆ ಪೂಜೆ ಮಾಡುತ್ತಿದ್ದಾಗ ತಾಯಿ ಹೇಳುತ್ತಿದ್ದ ಪುರಂದರದಾಸ, ರಾಮದಾಸ, ತಾಳ್ಲಪಾಕಂ ಚಿನ್ನಯ್ಯ ಮುಂತಾದವರ ಕೀರ್ತನೆಗಳನ್ನು ಕೇಳುತ್ತ ಪರವಶವಾಗುತ್ತಿದ್ದರು. ಆ ಕಾಲದಲ್ಲೇ ನಮೋ ನಮೋ ರಾಘವಾಯ ಎಂಬ ದಿವ್ಯನಾಮಕೀರ್ತನೆಯನ್ನು ರಚಿಸಿದರು. ಇವರ ಪ್ರತಿಭೆ ಸಂಗೀತಾಸಕ್ತಿಗಳನ್ನು ಕಂಡ ತಂದೆ ಇವರನ್ನು ಶೊಂಠಿ ವೆಂಕಟ್ರಮಣಯ್ಯನೆಂಬ ಮಹಾವೈಣಿಕನ ಬಳಿಗೆ ಸಂಗೀತ ವಿದ್ಯಾಭ್ಯಾಸಕ್ಕೆ ಕಳುಹಿಸಿದರು. ಆತ ತಂಜಾವೂರು ಆಸ್ಥಾನದ ಮಹಾವಿದ್ವಾಂಸ; ರಾಜರಿಂದ ಸನ್ಮಾನಿತನಾಗಿದ್ದವ.

ತ್ಯಾಗರಾಜರ ಮನೆತನದಲ್ಲಿಯೂ ಸಂಗೀತವಿತ್ತು. ಅವರ ತಾಯಿಯ ತಂದೆ ಕಾಳಹಸ್ತಯ್ಯ ವೈಣಿಕ. ಈ ಕಾರಣದಿಂದ ಅವರ ಮನೆಯಲ್ಲಿ ಸಂಗೀತಶಾಸ್ತ್ರದ ಗ್ರಂಥಗಳಿದ್ದವು. ರಾಮಕೃಷ್ಣಾನಂದಸ್ವಾಮಿಗಳು ಇವರನ್ನು ಪಂಚನಂದೀಶ್ವರನ ಆಲಯಕ್ಕೆ ಕೊಂಡೊಯ್ದು ಅಲ್ಲಿ ಸ್ವರಾರ್ಣವವೆಂಬ ಶಾಸ್ತ್ರಗ್ರಂಥವನ್ನು ಕೊಟ್ಟು ಉಪದೇಶ ಮಾಡಿದರು. ರಾಮಕೃಷ್ಣಾನಂದರು ನಾರದರ ಅವತಾರವೆಂದು ಪ್ರತೀತಿ. ಇದನ್ನು ಗ್ರಹಿಸಿಯೇ ತ್ಯಾಗರಾಜರು ಶ್ತೀನಾರದ ನಾದಸರಸೀರುಹ ಭೃಂಗಶುಭಾಂಗ ಎಂದು ಹಾಡಿದ್ದಾರೆ. ಅಂತೂ ಸಂಗೀತವೇ ತ್ಯಾಗರಾಜರ ಬಾಳಿನ ಮುಖ್ಯ ಪ್ರವೃತ್ತಿಯಾಯಿತು.
ಹದಿನೆಂಟನೆಯ ವಯಸ್ಸಿನಲ್ಲಿ ತ್ಯಾಗರಾಜರಿಗೆ ಪಾರ್ವತಿ ಎಂಬ ಕನ್ಯೆಯೊಂದಿಗೆ ವಿವಾಹವಾಯಿತು. ಎರಡು ಮೂರು ವರ್ಷಗಳ ಅನಂತರ ತಾಯಿ ತಂದೆ ಹೆಂಡತಿ - ಎಲ್ಲ ತೀರಿಕೊಂಡರು. ಅನಂತರ ತ್ಯಾಗರಾಜರು ಹೆಂಡತಿಯ ತಂಗಿ ಕಮಲಮ್ಮನನ್ನು ಮದುವೆಯಾದರು. ತಂದೇ ತೀರಿಕೊಂಡ ಮೇಲೆ ಪರಂಪರೆಯಲ್ಲಿ ಬಂದಿದ್ದ ರಾಮಪಂಚಾಯತಪೂಜೆಯನ್ನು ತ್ಯಾಗರಾಜರೇ ಮಾಡಲು ಮೊದಲಿಟ್ಟರು. ಪಂಚನಂದೀಶ್ವರ ದೇವಾಲಯದಲ್ಲಿ ದಿನವೂ ಉಷಃ ಕಾಲದಲ್ಲೆದ್ದು ರಾಮಷಡಕ್ಷರೀ ಮಂತ್ರವನ್ನು ಜಪಿಸುತ್ತ ಮೂವತ್ತೆಂಟು ವರ್ಷಗಳಲ್ಲಿ ತೊಂಬತ್ತಾರು ಕೋಟಿ ಸಾರಿ ಜಪವನ್ನು ಪೂರೈಸಿದರು. ರಾಮ ಆಗ ಪ್ರತ್ಯಕ್ಷನಾದನೆಂದು ಪ್ರತೀತಿ. ವಾಲ್ಮೀಕಿ ತನ್ನ ರಾಮಾಯಣವನ್ನು 24,000 ಶ್ಲೋಕಗಳಲ್ಲಿ ರಚಿಸಿದಂತೆಯೇ ತ್ಯಾಗರಾಜರು 24,000 ಕೀರ್ತನೆಗಳನ್ನು ರಚಿಸಿದರೆಂದೂ ಪ್ರತೀತಿಯಿದೆ. ಜೀವನೋಪಾಯಕ್ಕಾಗಿ ತ್ಯಾಗರಾಜರು ಊಂಛವೃತ್ತಿಯನ್ನು ಅವಲಂಬಿಸಿದರು. ಇವರ ಊಂಛವೃತ್ತಿ ಊರಿನಲ್ಲಿ ದೇವರ ಉತ್ಸವದಂತೆ ಕಂಗೊಳಿಸುತ್ತಿದ್ದಿತಂತೆ. ಊರಿನ ಗ್ರಹಸ್ಥರೆಲ್ಲ ಇವರನ್ನು ತುಂಬ ಮರ್ಯಾದೆಯಿಂದ ಕಂಡು ಇವರ ಬಾಳಿಗೆ ನೆರವಾಗುತ್ತಿದ್ದರು. ಇವರ ಇಡೀ ಬಾಳು ರಾಮಭಕ್ತಿಮಯವಾಗಿದ್ದಿತು.

ಸಂಗೀತ, ಸಾಹಿತ್ಯಗಳಲ್ಲಿ ತುಂಬ ನಿಷ್ಣಾತರಾಗಿದ್ದರೂ ತ್ಯಾಗರಾಜರಿಗೆ ಜ್ಯೋತಿಷ್ಯ ವೇದ, ಪುರಾಣ, ಗಣಿತಶಾಸ್ತ್ರ ಮುಂತಾದ ವಿಷಯಗಳಲ್ಲಿ ವಿಶೇಷವಾದ ಪಾಂಡಿತ್ಯವಿತ್ತು. ಈ ವಿಷಯಗಳಲ್ಲಿ ಶಿಷ್ಯರಿಗೆ ದಿನವೂ ಪಾಠ ಹೇಳುವ ಪದ್ಧತಿಯೂ ಇತ್ತು. ಶಿಷ್ಯರಿಂದ ಇವರು ಯಾವ ದಕ್ಷಿಣೆಯನ್ನು ಸ್ವೀಕರಿಸುತ್ತಿರಲಿಲ್ಲ. ಸಂಗೀತದಲ್ಲಿ ವಾಲಾಜಾಪೇಟೆ ವೆಂಕಟರಮಣ ಭಾಗವತರು, ಮಾನಂಬುಚಾವಡಿ ವೆಂಕಟಸುಬ್ಬ ಅಯ್ಯರ್, ಉಮಯ್ಯಾಳ್ಪುರಂ ಕೃಷ್ಣಭಾಗವತರು, ಸುಂದರ ಭಾಗವತರು ತಿರುವತ್ತಿಯೂರು ವೀಣೆ ಕುಪ್ಪಯ್ಯ ಇವರು ಪ್ರಖ್ಯಾತ ಶಿಷ್ಯರು.

ತ್ಯಾಗರಾಜರಿಗೆ ಮುಂಚೆ ಪುರಂದರದಾಸರು ಕರ್ಣಾಟಕ ಸಂಗೀತದ ಕಟ್ಟಡವನ್ನು ಸ್ವಚ್ಚಗೊಳಿಸಿದ್ದರು. ಗೀತ, ಸುಳಾದಿ, ಕೃತಿಗಳನ್ನು ರಚಿಸಿ ಕರ್ಣಾಟಕ ಸಂಗೀತಕ್ಕೆ ಪ್ರಾಯೋಗಿಕವಾದ ಕಳೆಯನ್ನು ತಂದುಕೊಟ್ಟರು. ಈ ಆಧಾರವನ್ನು ಅವಲಂಬಿಸಿ ತ್ಯಾಗರಾಜರು ಪ್ರಸಿದ್ಧರಾಗಗಳಲ್ಲೂ ಅಪೂರ್ವರಾಗಗಳಲ್ಲೂ ಲಲಿತವಾದ ಸ್ವರಸಂಚಾರಗಳುಳ್ಳ ಸಾವಿರಾರು ಕೀರ್ತನೆಗಳನ್ನು ರಚಿಸಿದರು. ವಿದ್ಯಾರ್ಥಿಗಳ ಅಗತ್ಯವನ್ನು ಅರಿತು ಮಧ್ಯಮಕಾಲ, ವಿಳಂಬಕಾಲದ ಕೀರ್ತನೆಗಳನ್ನು ರಚಿಸಿ ಸಂಗತಿಗಳನ್ನು ಹಾಕುವ ಸಂಪ್ರದಾಯವನ್ನು ಆರಂಭಿಸಿದರು. ದಿವ್ಯನಾಮ, ಭಜನಪದ್ಧತಿ, ಪಂಚರತ್ನಗಳು ಇವರ ಕೃತಿವಿಶೇಷಗಳು. ಉತ್ತಮ ವಾಗ್ಗೇಯಕಾರರಲ್ಲಿ ತ್ಯಾಗರಾಜರು ಅಗ್ರಗಣ್ಯರು. ಇವರ ಕೃತಿಗಳಲ್ಲಿ ಭಾವಪುಷ್ಟಿ, ಪದಲಾಲಿತ್ಯ, ಸ್ವಚ್ಚರಾಗ ನಿರ್ದೇಶಗಳು ಕಾಣುತ್ತವೆ. ಇವರ ಸಾಹಿತ್ಯವೂ ಸಂಗೀತವೂ ಸಹಜವಾಗಿ, ಸರಳವಾಗಿ, ಪ್ರಯತ್ನವಿಲ್ಲದೆ ಹೊರಬಂದಿವೆ. ಇವರು ತಮ್ಮ ಕೃತಿಗಳನ್ನೆಲ್ಲ ಬಹುಶಃ ತೆಲುಗಿನಲ್ಲೂ ಕೆಲವನ್ನು ಸಂಸ್ಕøತದಲ್ಲೂ ರಚಿಸಿದ್ದಾರೆ. ಇವರು ಹೇಳುತ್ತ ಹೋದಂತೆ ಶಿಷ್ಯರು ಸ್ವರಪ್ರಾಸ್ತಾರಸಮೇತ ಬರೆದಿಟ್ಟು ಕೊಳ್ಳುತ್ತಿದ್ದರು. ಹೀಗಾಗಿ ಇವರ ಸಂಗೀತಸಾಹಿತ್ಯಗಳೆರಡೂ ಇಂದಿನವರೆಗೂ ಸಂಪ್ರದಾಯ ಶುದ್ಧವಾಗಿ ಉಳಿದುಬಂದಿವೆ.

ಸಂಗೀತ ತ್ಯಾಗರಾಜರ ಪಾಲಿಗೆ ಸಾಧನೆ. ಇವರದ್ದು ನಿರಂತರ ರಾಮಭಜನೆ. ಇವರ ಬಾಳಿನ ಒಂದೊಂದು ವಿವರವೂ ರಾಮನಿಗೆ ಸಮರ್ಪಿತವಾಗಿತ್ತು. ಇವರು ತಮ್ಮ ಸಂಗೀತದಿಂದ ರಾಮಭಕ್ತಿ ಸಾಮ್ರಾಜ್ಯವನ್ನು ಕಟ್ಟಲು ಯತ್ನಿಸಿದರು. ಭಕ್ತಿಯಿಲ್ಲದೆ ಸಂಗೀತಜ್ಞಾನ ಸನ್ಮಾರ್ಗಪ್ರವರ್ತಕವಾಗದೆಂದು ಇವರ ಮತ. ಸಂಗೀತ ಭಗವದಾರಾಧನೆಗೆ ಅನುವಾಗ ಬೇಕಷ್ಟೆ. ಈ ದೃಷ್ಟಿಯಿಂದ ಇವರು ಸಂಗೀತವನ್ನು ಯಾವ ತೆರನಾದ ನರಸ್ತುತಿಯಾಗಲಿ ಸ್ವಾರ್ಥಸಾಧನೆಯಾಗಲೀ ಅಳವಡಿಸಿಕೊಳ್ಳಲಿಲ್ಲ. ಇವರದ್ದು ಕಠೋರವಾದ ನಿಷ್ಠೆ. ರಾಜಮಹಾರಾಜರು ಇವರನ್ನು ತಮ್ಮ ಆಸ್ಥಾನಗಳಿಗೆ ಆಹ್ವಾನಿಸಿದರು. ತ್ಯಾಗರಾಜರು ಇಂಥ ವೃತ್ತಿಗಳಿಂದ ಒದಗುವ ಹಣ ತಮಗೆ ಬೇಡವೆಂದು ರಾಜಾಸ್ಥಾನಗಳಿಗೆ ಹೋಗಲು ತಿರಸ್ಕರಿಸಿದರು. ನಿಧಿ ಚಾಲಾ ಸುಖಮಾ, ರಾಮನಿ ಸನ್ನಿಧಿ ಸೇವ ಸುಖಮಾ-ಎಂಬ ಕಿರ್ತನೆ ಇಂಥ ಒಂದು ಸಂದರ್ಭದಲ್ಲಿ ರಚಿತವಾದದ್ದಂತೆ.

ತ್ಯಾಗರಾಜರು ತಿರುವತ್ತಿಯೂರು, ತಿರುಪತಿ, ಕಂಚಿ, ಶ್ರೀರಂಗ, ನಾಗಪಟ್ಟಣ ಮಧುರೆಗಳಿಗೆ ತೀರ್ಥಯಾತ್ರೆ ಹೋಗಿದ್ದರು. ಇಷ್ಟೇ ಇವರು ಮಾಡಿದ ಯಾತ್ರೆ. ಉಳಿದ ಕಾಲವನ್ನೆಲ್ಲ ಇವರು ತಿರುವಯ್ಯಾರಿನಲ್ಲೇ ಕಳೆದರು. ತಿರುವಾಂಕೂರಿನ ರಾಜ ಕುಲಶೇಖರ ಸ್ವಾತಿತಿರುನಾಳ್ ಇವರನ್ನು ತಮ್ಮ ಆಸ್ಥಾನಕ್ಕೆ ಇನ್ನಿಲ್ಲದಂತೆ ಕರೆದರು. ಇವರು ಹೋಗಲಿಲ್ಲ. ನಿಧಿ ನಿಕ್ಷೇಪಮುಲಕಂಟೇ ರಾಮುನಿ ಸನ್ನಿದೇ ಸುಖಂ ; ಮಮತ ಬಂಧನಯಂತ ನರಸ್ತುತಿ ಕಂಟೇ ಸಮತಿ ತ್ಯಾಗ ರಾಜನುತುನಿ ಕೀರ್ತನೇ ಸುಖಂ- ಎಂದು ಇವರ ಮತ. ಇವರು ದಿನವೂ ಬಮ್ಮೆರ ಪೋತನನ ಭಾಗವತವನ್ನು ಪಾರಾಯಣ ಮಾಡುತ್ತಿದ್ದರಾಗಿ ಅವನ ಈ ನಿಶ್ಚಲ ನಿಲುವು ಇವರಿಗೂ ಬಂದಿತ್ತು.

ವೃದ್ಧಾಪ್ಯದಲ್ಲಿ ತಮ್ಮ ಎರಡನೆಯ ಹೆಂಡತಿ ಕಮಲಮ್ಮನು ತೀರಿಕೊಂಡಾಗ ತ್ಯಾಗರಾಜರು ಏ ಪಾಪಮು ಜೇಸಿತಿರಾ, ರಾಮ, ನೀಕೇಪಾಟೈನ ದಯರಾದಂ ಎಂಬ ಕಿರ್ತನೆಯನ್ನು ಅಠಾಣಾ ರಾಗದಲ್ಲಿ ರಚಿಸಿದರಂತೆ. ಅಲ್ಲಿಂದ ಮುಂದೆ ಇವರು ತೀರ ವಿರಕ್ತರಾಗಿ ಜೀವನ ನಡೆಸತೊಡಗಿದರು. ವಿಶ್ವಾವಸು ಸಂವತ್ಸರ ಪುಷ್ಯ ಬಹುಳ ಪಂಚಮಿ ದಿವಸ ಅತುರ ಸನ್ಯಾಸವನ್ನು ಕೈಗೊಂಡು ಉಷಃ ಕಾಲದಲ್ಲೆದ್ದು ಸ್ನಾನಹ್ನಿಕಗಳನ್ನು ತೀರಿಸಿ, ತಮ್ಮ ಶಿಷ್ಯರೆಲ್ಲ ನೆರೆದು ರಾಮನಾಮ ಘೋಷ ಮಾಡುತ್ತಿರಲು ಧನ್ಯಾಸಿರಾಗದಲ್ಲಿ ಶ್ಯಾಮಸುಂದರಾಂಗ ಸಕಲಶಕ್ತಿ ನೀವೇರಾ ಎನ್ನುವ ಕೀರ್ತನೆ ರಚಿಸಿ ತ್ಯಾಗರಾಜರು ಮುಕ್ತರಾದರು.

ಅರವತ್ತುವರ್ಷಗಳ ಅನಂತರ ತಿರುವಯ್ಯಾರಿನ ತ್ಯಾಗರಾಜರ ಸಮಾಧಿಯ ಮೇಲೆ ಬೆಂಗಳೂರು ನಾಗರತ್ನಮ್ಮನೆಂಬಾಕೆ ಭವ್ಯವಾದ ಮಂದಿರವನ್ನು ಕಟ್ಟಿಸಿದರು. ಪ್ರತಿ ಪುಷ್ಯಬಹುಳ ಪಂಚಮಿಯಂದು ವಿಜೃಂಭಣೆಯಿಂದ ಅಲ್ಲಿ ತ್ಯಾಗರಾಜ ಆರಾಧನೆ ನಡೆಯುತ್ತದೆ.
(ಎಸ್.ಕೆ.ಆರ್.; ಕೆ.ಎಸ್.ಯು.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ